12/06/2026
ಕಾಂಗ್ರೆಸ್ ನಿಷ್ಠಾವಂತ ಸೇವೆಗೆ ಮಾನ್ಯತೆ ನೀಡಲಿ: ಎ.ಸಿ. ಕಡ್ಲೂರ್ ಅವರಿಗೆ ಎಂಎಲ್‌ಸಿ ಸ್ಥಾನ ನೀಡುವಂತೆ ಆಗ್ರಹ
ಯಾದಗಿರಿ: ಕಾಂಗ್ರೆಸ್ ಪಕ್ಷದ ಪರವಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಿಷ್ಠೆಯಿಂದ ದುಡಿದಿರುವ ಹಿರಿಯ ಮುಖಂಡ ಎ.ಸಿ. ಕಡ್ಲೂರ್ ಅವರಿಗೆ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಸ್ಥಾನ ನೀಡಿ ಗೌರವಿಸಬೇಕೆಂಬ ಆಗ್ರಹ ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಕಾರ್ಯಕರ್ತರಿಂದ ಹೆಚ್ಚಾಗಿದೆ.
ಪಕ್ಷದ ತತ್ವ, ಸಿದ್ಧಾಂತಗಳು ಹಾಗೂ ಸಂಘಟನಾ ಬಲವರ್ಧನೆಗಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಕಡ್ಲೂರ್ ಅವರು ಕಾಂಗ್ರೆಸ್‌ನ ನಿಜವಾದ ನಿಷ್ಠಾವಂತ ಕಾರ್ಯಕರ್ತರ ಪ್ರತಿನಿಧಿಯಾಗಿದ್ದಾರೆ. ಗ್ರಾಮೀಣ ಮಟ್ಟದಿಂದ ಪಕ್ಷವನ್ನು ಕಟ್ಟುವಲ್ಲಿ ಹಾಗೂ ಜನರೊಂದಿಗೆ ಪಕ್ಷದ ಸಂಪರ್ಕವನ್ನು ಗಟ್ಟಿಗೊಳಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಯುವ ನಾಯಕ ಆರಿಫ್ ಸಾಗ್ರಿ, ಜಮೀರ್ ಸೇರಿದಂತೆ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಹೈಕಮಾಂಡ್‌ಗೆ ಮನವಿ ಸಲ್ಲಿಸಿ, ಸಂಕಷ್ಟದ ಸಂದರ್ಭಗಳಲ್ಲಿಯೂ ಪಕ್ಷದ ಪರವಾಗಿ ನಿಂತು ಸಂಘಟನೆಗಾಗಿ ಶ್ರಮಿಸಿರುವ ಕಡ್ಲೂರ್ ಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ನೀಡುವುದು ನ್ಯಾಯಸಮ್ಮತ ಕ್ರಮವಾಗಲಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವಲ್ಲಿ ಕಡ್ಲೂರ್ ಅವರ ಕೊಡುಗೆ ವಿಶಿಷ್ಟವಾಗಿದ್ದು, ಪಕ್ಷದ ಬೆಳವಣಿಗೆಯಲ್ಲಿ ಅವರು ವಹಿಸಿರುವ ಪಾತ್ರವನ್ನು ಪರಿಗಣಿಸಿ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ. ಇದರಿಂದ ಹಿರಿಯ ಕಾರ್ಯಕರ್ತರಿಗೆ ಗೌರವ ದೊರಕುವುದರ ಜೊತೆಗೆ ಪಕ್ಷದ ತಳಮಟ್ಟದ ಕಾರ್ಯಕರ್ತರಿಗೂ ಹೊಸ ಪ್ರೇರಣೆ ಸಿಗಲಿದೆ ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ನಾಯಕತ್ವ ಹಾಗೂ ಪಕ್ಷದ ಹೈಕಮಾಂಡ್ ಅವರು ಕಡ್ಲೂರ್ ಅವರ ಸೇವಾ ಅವಧಿ, ಸಂಘಟನಾ ಸಾಮರ್ಥ್ಯ ಮತ್ತು ಪಕ್ಷದ ಮೇಲಿನ ಬದ್ಧತೆಯನ್ನು ಗಮನಿಸಿ ಎಂಎಲ್‌ಸಿ ಸ್ಥಾನ ನೀಡಿದರೆ, ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಲಿದ್ದು, ಪಕ್ಷ ಸಂಘಟನೆ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ನಾಯಕ ಸಿರಾಜ್ ಕಂದಕೂರು, ಜಹೀರುದ್ದೀನ್ ಜಗೀರ್‌ದಾರ್, ಮಸೂದ್ ಸಾಬ್ (ಬಿಸ್ಮಿಲ್ಲಾ ಟ್ರಾನ್ಸ್‌ಪೋರ್ಟ್), ಅಬ್ದುಲ್ ಸಲೀಂ ಸಾಬ್ ಸಾಗ್ರಿ, ಅಫ್ರಿದಿ, ಅನ್ವರ್ ಪಟೇಲ್, ಪರ್ವೇಜ್ ಪೊಲೀಸ್ ಪಟೇಲ್, ಅಬ್ದುಲ್ ಖಾದಿರ್, ರಬ್ಬಾನಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಯುವಕರು ಉಪಸ್ಥಿತರಿದ್ದು, ಎ.ಸಿ. ಕಡ್ಲೂರ್ ಅವರಿಗೆ ಎಂಎಲ್‌ಸಿ ಸ್ಥಾನ ನೀಡುವಂತೆ ಮತ್ತೊಮ್ಮೆ ಒತ್ತಾಯಿಸಿದರು.